Published - Tue, 03 Oct 2023
ಇದು ಆಯುರ್ವೇದದಲ್ಲಿ ಮಾತ್ರ ಹೇಳಿರುವ ಸತ್ಯ...
ನಮ್ಮಆಹಾರಗಳಲ್ಲೇ ಅನೇಕ ಕಾಯಿಲೆಗಳನ್ನು ತಡೆಯಬಹುದು, ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಬಹುದು, ಚಿಕಿತ್ಸೆ ಕೂಡಾ ಮಾಡಿಕೊಳ್ಳಬಹುದು...
•••••••••••••••••••••••••••••••••••••••
ಕಾಯಿಲೆಯ ಪರಿಚಯ:
ಆಳವಾದ ಅಜೀರ್ಣ ರೋಗವು, ರಸದ ರೂಪದಲ್ಲಿ ಸರ್ವಶರೀರವನ್ನು ಸಂಚರಿಸಿ, ಸಂಧಿಗಳ ನೋವು, ಊತ, ಸೆಳೆತ, ಮಾಂಸಖಂಡಗಳ ಬಿಗಿ ಹಿಡಿತ, ಬೆನ್ನು ಹಿಡಿಯುವಿಕೆ. ಚಳಿಗೆ ಹೆಚ್ಚಾಗುವಿಕೆ, ಚೇಳು ಕಡಿದವರಂತೆ ತಡೆಯಲಾರದ ನೋವನ್ನು ತರುವುದೇ ಆಮವಾತ ಇಲ್ಲಿ ಆಧುನಿಕರ ರುಮ್ಯಾಟಿಸಮ್‌ಗೆ ಸರಿಹೊಂದುವ, ಲಕ್ಷಣಗಳಿವೆ...
ಚಿಕಿತ್ಸಾ ದೃಷ್ಟಿ:
ಇಲ್ಲಿ ಕಾಯಿಲೆಯ ಕಾರಣ ತಿಳಿಯಬೇಕು ಮತ್ತು ಅವುಗಳನ್ನು ತಕ್ಷಣದಿಂದ ನಿಲ್ಲಿಸಬೇಕು. ಇದು ಮೊದಲ ಚಿಕಿತ್ಸೆ...
ನಂತರ,
ಈ ಕಾಯಿಲೆಗೆ ನಿರ್ದಿಷ್ಟ ಆಹಾರವನ್ನು ಆಯುರ್ವೇದ ಆಚಾರ್ಯರು ಉಲ್ಲೇಖಿಸಿದ್ದಾರೆ. ಅವುಗಳನ್ನು ತಪ್ಪದೇ ಪಾಲಿಸಬೇಕು...
ಆಮವಾತಕ್ಕೆ ಕಾರಣವೇನು?:
ಆಲಸ್ಯ, ಶಾರೀರಿಕ ಶ್ರಮ ವಹಿಸದೇ ಆಲಸಿಯಾದ ಜೀವನಶೈಲಿ, ಅಜೀರ್ಣ ಇರುವಾಗ ಆಹಾರ ಸೇವನೆ...
ಮತ್ತು ಶಕ್ತಿಭರಿತ ಸಕ್ಕರೆ, ಎಣ್ಣೆ, ಗೋಧಿ, ಉದ್ದುಗಳಂತಹ ಆಹಾರ ಸೇವನೆಯ ತಕ್ಷಣವೇ ಬೆವರು ಬರುವಂತೆ ಓಡುವುದು, ಕೆಲಸ ಮಾಡುವುದು, ಮೈಥುನಕ್ರಿಯೆ ನಡೆಸುವುದು...
ಇವುಗಳಿಂದ ಹೇಗೆ ಏಕೆ ಆಮವಾತ ಬರುತ್ತದೆ?:
ಆಲಸ್ಯದ ವ್ಯಕ್ತಿ, ಶಕ್ತಿಯುತ ಆಹಾರ ಸೇವಿಸಿದರೆ, ಅಜೀರ್ಣವಾಗುವುದು, ಪಾಚನ ಶಕ್ತಿ ಕ್ಷೀಣಿಸುವುದು ಸತ್ಯ. ಇಂತವರು, ಒಮ್ಮಿಂದೊಮ್ಮೆ ಸಶಕ್ತ ಆಹಾರ ಸೇವಿಸಿ, ಬೆವರನ್ನು ಹೊರಹಾಕುವ ಕ್ರಿಯೆಗಳಲ್ಲಿ ಕೆಲವೇ ಕಾಲ ತೊಡಗಿದರೂ ಸಹ ತೊಂದರೆ ಖಚಿತ. ಇಲ್ಲಿ ಪಚನವಾಗದ ಆಹಾರ ಕರುಳುಗಳಲ್ಲಿ ಇರುತ್ತದೆ, ಬೆವರು ಅಂತಹ ಆಹಾರವನ್ನು ರಕ್ತಕ್ಕೆ ಸೆಳೆದೆಳೆಯುತ್ತದೆ. ಉದಾಹರಣೆಗೆ - ಗಿಡದ ಎಲೆಗಳು ನೀರನ್ನು ಹೊರಹಾಕುತ್ತಿದ್ದರೆ ಬೇರು ನೀರನ್ನು ಸೆಳೆದೆಳೆದು ಕೊಡುವಂತೆ. ಕರುಳಿನಿಂದ ಅಜೀರ್ಣದ ರಾಸಾಯನಿಕಗಳು ಸೆಳೆದು ರಕ್ತದೊಂದಿಗೆ ಬೆರೆತುಬಿಡುತ್ತವೆ. ಆಹಾರವೇ ಆದರೂ, ಸೂಕ್ತ ವಿಭಜನೆ ಇಲ್ಲದೇ ರಕ್ತವನ್ನು ಸೇರಿದ ಈ ಆಹಾರದ ರಾಸಾಯನಿಕಗಳಿಗೆ ಪ್ರತಿಕ್ರಿಯೆ ರೂಪವಾಗಿ ರಕ್ತದ ಅಸ್ವೀಕೃತಿಯೇ ಸಂಧುಗಳ ಮತ್ತು ಮಾಂಸಖಂಡಗಳ ಊತ. ಈ ಅಜೀರ್ಣ ಆಹಾರದ ಅಂಶವನ್ನು ಯಾವುದೋ ಅಪಾಯಕಾರೀ ಅಂಶ ಶರೀರ ಸೇರಿದೆ ಎಂದು ರಕ್ತದ ಅಟೋ ಇಮ್ಯೂನ್ ಸಿಸ್ಟಂ ಸ್ವಯಂ ಚಾಲನೆಗೊಂಡು ಆ ರಾಸಾಯನಿಕವನ್ನು ನಿವಾರಿಸುತ್ತದೆ. ಹೀಗೆ ಸ್ವಯಂಚಾಲಿತ ಇಮ್ಯುನಿಟಿಯೇ ಆಮವಾತ!
ಆಮವಾತಹರ ಆಹಾರ:
ಹಸಿ ಶುಂಠಿಯನ್ನು ಜಜ್ಜಿ ರಸ ತೆಗೆದು, ಸ್ವಲ್ಪವೇ ಸ್ವಲ್ಪ ಬೆಲ್ಲ ಸೇರಿಸಿ, ಖಾಲಿ ಹೊಟ್ಟೆಗೆ ಬೆಳಿಗ್ಗೆ ಸಂಜೆ ಕುಡಿಯುವುದು...
ಅಪಥ್ಯ:
ಮೊಸರು, ಮಾಂಸಾಹಾರ, ಮೈದಾ, ಉದ್ದು, ಗೋಧಿ ಮುಂತಾದ ಅಜೀರ್ಣವಾಗುವ ಆಹಾರದ ಸೇವನೆ, ಅತಿಮಾತ್ರ ಆಹಾರ ಸೇವನೆ, ಇವುಗಳಿಂದ ತಕ್ಷಣ ರೋಗ ಹೆಚ್ಚುತ್ತದೆ. ಇವುಗಳನ್ನು ತ್ಯಜಿಸಿ ಬಿಡಿ. ಹಾಗೆಯೇ, ಹಗಲು ನಿದ್ದೆ, ಗಾಳಿಗೆ ಮೈ ಒಡ್ಡಿ ಕುಳಿತುಕೊಳ್ಳುವುದು, ಅಜೀರ್ಣದಲ್ಲಿ ನಡಿಗೆ, ಓಡುವುದು. ಇವುಗಳೂ ಸಹ ಅಪಥ್ಯಗಳು, ಇವುಗಳನ್ನು ಮಾಡಬಾರದು...
ಆಮವಾತಹರ ವಿಹಾರ:
ಅಲ್ಪ ಆಹಾರ, ಅಲ್ಪ ಚೇಷ್ಠಾ, ನಿರಂತರ ವಿಚಾರ ಮಗ್ನತೆ, ಉಷ್ಣಜಲಪಾನ, ಉಷ್ಣ ಉಪಚಾರ ಅಂದರೆ ಸ್ನಾನ, ಮುಖಪ್ರಕ್ಷಾಲನಕ್ಕೆ ಉಷ್ಣಜಲದ ಉಪಯೋಗ.
ಗುದಪ್ರಕ್ಷಾಲನಕ್ಕೂ ಉಷ್ಣಜಲ ಬಳಸಬಹುದು.
ಆಮವಾತ ಚಿಕಿತ್ಸೆ:
ಅಮೃತಬಳ್ಳಿ, ಶುಂಠಿ, ಭದ್ರಮುಸ್ತ, ಏರಂಡಗಳ ಕಷಾಯ ಸೇವನೆ. ಪಂಚಕರ್ಮ ಚಿಕಿತ್ಸೆಯಲ್ಲಿ - ಸದ್ಯೊ ವಿರೇಚನ ಮತ್ತು ಯೋಗಬಸ್ತಿ...
•••••••••••••••••••••••••••••••••••••••
ಈ ಎಲ್ಲಾ ಕಾರಣಗಳಿಂದ ಆಮವಾತವನ್ನು ಆಹಾರದಿಂದ ಗುಣಪಡಿಸಬಹುದಾದ ಸಂಗತಿಗಳನ್ನು ಹಂಚಿಕೊಳ್ಳಲು ಬಯಸಿ ಆಹಾರವೇ ಔಷಧ ಎಂಬ ಶೀರ್ಷಿಕೆಯ ಮಾಲಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ...
ಆಚಾರ್ಯರ ಈ ರೋಗನಿದಾನಗಳು (ಕಾಯಿಲೆಯ ಕಾರಣಗಳು) ಸರ್ವಕಾಲಕ್ಕೂ ಪ್ರಸ್ತುತವಾದ ಸತ್ಯಸಂಗತಿಗಳು, ಆದ್ದರಿಂದ ದಯಮಾಡಿ ಸಂಗ್ರಹಿಸಿಟ್ಟು, ಬಳಸಿಕೊಳ್ಳಿ...
•••••••••••••••••••••••••••••••••••••••
Tue, 03 Oct 2023
Tue, 03 Oct 2023
Tue, 03 Oct 2023
Write a public review