Published - Tue, 03 Oct 2023
•••••••••••••••••••••••••••••••••••••••
ಆಹಾರದ ಜೊತೆಗಿನ ನೈಸರ್ಗಿಕ ಸಂಬಂಧ ಮತ್ತು ಅದಕ್ಕೆ ಕೊಡುವ ಗೌರವ ಎಂದರೆ ನಿಯಮಗಳು, ಇವುಗಳ ಜೊತೆಗಿನ ಪಯಣವೇ ಆರೋಗ್ಯ.
"ಆಹಾರ ಒಂದು ನಿರ್ಜೀವ ವಸ್ತುವಲ್ಲ, ಅದು ನಮ್ಮ ಅವ್ಯಕ್ತ ಶರೀರ!!"
ಈ ಶರೀರ ನಿತ್ಯವೂ ಸರಿಯಾಗಿ ನಡೆಯಲು ನಿರ್ದಿಷ್ಟ ನಿಯಮಗಳಿವೆ --
ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ,
ನಾಲಿಗೆಯಿಂದ ಮಾತ್ರ ರುಚಿ ಸಾಧ್ಯ,
ಕೈಯಿಂದ ಕೆಲಸ ಸಾಧ್ಯ,
ಕಾಲಿನಿಂದ ನಡಿಗೆ ಸಾಧ್ಯ...
ಹಾಗೆಯೇ, ಆಹಾರಕ್ಕೂ ನಿರ್ದಿಷ್ಟ ನಿಯಮಗಳಿವೆ, ಆಹಾರದ ಈ ರೀತಿಯ ತಯಾರಿಕೆ ಮಾತ್ರ ನಮಗೆ ಇಂತಹ ಅನುಕೂಲವನ್ನು ಸೃಷ್ಟಿಸುತ್ತದೆ, ಇಲ್ಲದಿದ್ದರೆ ಸಹಜ ಚಲನೆಗೆ ಅನಾನುಕೂಲ ಮಾಡುತ್ತದೆ, ಅದೇ ಅನಾರೋಗ್ಯ ಅಥವಾ ವ್ಯಾಧಿ.
•••••••••••••••••••••••••••••••••••••••
ಮಾನವನ ವ್ಯಾಧಿಗಳಲ್ಲಿ ಹೆಚ್ಚಿನವು, ಅಪಘಾತಗಳನ್ನು ಹೊರತುಪಡಿಸಿ ಶರೀರದೊಳಗೆ ಆದ ವ್ಯತ್ಯಾಸದಿಂದ ಆದಂತಹುಗಳು. ಇದಕ್ಕೆ ಕಾರಣ, ನಮ್ಮ ಆಹಾರದ ಆಯ್ಕೆ ಮತ್ತು ತಯಾರಿಕಾ ನಿಯಮಗಳ ವ್ಯತ್ಯಾಸ.
ವ್ಯಾಧಿಗಳಿಗೆ ಆಹಾರದ ಅನಿಯಮಗಳು ಕಾರಣ ಎಂದಾದರೆ, "ಕಾರಣ ತ್ಯಾಗ ಮಾಡಬೇಕಲ್ಲವೇ?" ನಿತ್ಯವೂ ತೊಂದರೆ ಕೊಡುವ ಯಾವುದನ್ನೇ ಆದರೂ ನಾವು ರಿಪೇರಿ ಅಥವಾ ರೀಪ್ಲೇಸ್ ಮಾಡುತ್ತೇವೆ ಅಲ್ಲವೇ? ಹಾಗೆಯೇ, ಸಹಜ ಜೀವನಕ್ಕೆ ಅಡ್ಡಿಪಡಿಸುವ ಈ ಆಹಾರ ಅನಿಯಮಗಳನ್ನು ತ್ಯಜಿಸುವುದೇ ರಿಪೇರಿ ಎಂದಾಗುತ್ತದೆ, ಇದನ್ನೇ ಆಚಾರ್ಯರು, "ನಿದಾನ ಪರಿಮಾರ್ಜನಮೇವ ಚಿಕಿತ್ಸಾ" ಎಂದಿದ್ದಾರೆ.
ಅಂದರೆ, "ಚಿಕಿತ್ಸೆ ಎಂದರೆ ಕಾರಣಗಳ ತ್ಯಾಗ" ಎಂದರ್ಥ. ಏಕೆ ತ್ಯಾಗ ಮಾಡಲೇಬೇಕು? ಎಂದರೆ ತ್ಯಾಗ ಮಾಡದಿದ್ದರೆ ಅದೇ ಹಂತದಲ್ಲಿ ಇರುತ್ತೇವೆ. ಮಗು ಹತ್ತನೇ ತರಗತಿಯನ್ನು ತ್ಯಾಗ ಮಾಡಿದ್ದರೆ, ಹನ್ನೊಂದಕ್ಕೆ ವರ್ಗ, ಇಲ್ಲದಿದ್ದರೆ ಅಲ್ಲೇ ಇರುತ್ತದೆ ಅಥವಾ ಶಿಕ್ಷಣದಿಂದಲೇ ಹೊರಬರುತ್ತದೆ.
ಹಾಗೆಯೇ, ರೋಗದ ಕಾರಣವಾದ ಆಹಾರ ತ್ಯಾಗ ಅಥವಾ ತಪ್ಪು ತಯಾರಿಕಾ ವಿಧಾನ ತ್ಯಾಗ ಮಾಡದಿದ್ದರೆ, ರೋಗದಲ್ಲೇ ಉಳಿಯುತ್ತೇವೆ ಅಥವಾ ಶರೀರದಿಂದಲೇ ಹೊರಹೋಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ, ಮರಣದೆಡೆಗೆ ಸಾಗುತ್ತೇವೆ.
ಹೀಗಾಗಿ, ಆಯುರ್ವೇದ ವೈದ್ಯ ತನ್ನೆಲ್ಲಾ ಶ್ರಮವನ್ನು ಕಾರಣ ಹುಡುಕುವುದರ ಕಡೆಗೇ ಹಾಕುತ್ತಾನೆ. ಶತಾಯಗತಾಯ ರೋಗಿಯಿಂದ ಅದನ್ನು ಬಿಡಿಸಲು ಪ್ರಯತ್ನಿಸುತ್ತಾನೆ.
ಅಂತವನು ಮಾತ್ರ ನಿಜವಾದ ವೈದ್ಯನಲ್ಲವೇ?
•••••••••••••••••••••••••••••••••••••••
ನೀವು ಗಮನಿಸಲೇಬೇಕಾದ ಅಂಶ ಎಂದರೆ, ಯಾವಾಗಲೂ ಔಷಧ ಆರೋಗ್ಯ ಕೊಡುತ್ತದೆ ಎಂಬ "ಸುಳ್ಳ"ನ್ನು ಸೂಕ್ಷ್ಮವಾಗಿ ಗುರುತಿಸಿಕೊಳ್ಳಬೇಕು. ಆಯುರ್ವೇದ ಎಂದರೆ ಪಥ್ಯ ಎಂದು ಮೂಗು ಮುರಿಯದಿರುವುದು.
ಎರಡು ವಿಷಯಗಳನ್ನು ನೆನಪಿಡಿ --
• ಇದು ಪಥ್ಯವಲ್ಲ, ಈಗಾಗಲೇ ಕೆಟ್ಟಿರುವ ಮತ್ತು ಹೆಚ್ಚಿನ ಜನ ಅದನ್ನು "ಮಾಮೂಲಿ ಆಹಾರ" ಎಂದು ಸೇವಿಸುತ್ತಿರುವ ಆಹಾರದ ಬಗ್ಗೆ ನೈಜ ತಿಳಿವಳಿಕೆಯನ್ನು ಪಡೆಯಿರಿ. ಮತ್ತು
• ಆರೋಗ್ಯಕ್ಕಾಗಿ ಇವುಗಳ ಪಾಲನೆ ಅನಿವಾರ್ಯ, ಇದಕ್ಕೆ ಯಾವುದೇ ಅಡ್ಡ ಅಥವಾ ಹತ್ತಿರದ ಮಾರ್ಗಗಳಿಲ್ಲ.
•••••••••••••••••••••••••••••••••••••••
ಧನ್ಯವಾದಗಳು
Tue, 03 Oct 2023
Tue, 03 Oct 2023
Tue, 03 Oct 2023
Write a public review